100% FREE Shipping all across India

ನಮ್ಮ ಸಂಕ್ರಾಂತಿ

ನಮ್ಮ ಸಂಕ್ರಾಂತಿ

 ಸಂಭ್ರಮದ ಸಂಕ್ರಾಂತಿ

ಹೊಸವರುಷದ ಹಬ್ಬ ಸಂಕ್ರಾಂತಿ

ಮನಸ್ಸಿಗೆ ಬಣ್ಣಗಳನ್ನು ತುಂಬುವ ಹಬ್ಬ ಸಂಕ್ರಾಂತಿ

ಜನರ ಮನೆ ಮನಗಳಿಗೆ ಸಿಹಿ ಬೆಲ್ಲವನ್ನು ಹಂಚುವ ವೈಭವದ ಸಂಕ್ರಾಂತಿ.

 • ಸಂಕ್ರಾಂತಿ ಹಬ್ಬ ವರ್ಷದ ಮೊದಲ ಹಾಗು ಅತ್ಯಂತ ಸಂಭ್ರಮದ ಹಬ್ಬ. ಸಂಕ್ರಾಂತಿ ಹಬ್ಬವೆಂದರೆ ನಮ್ಮೆಲ್ಲರ ಮನದಲ್ಲಿ ಬರುವ ಮೊದಲ ವಿಷಯವೆಂದರೆ ಎಳ್ಳು-ಬೆಲ್ಲ, ಸಿಹಿ ಮತ್ತು ಖಾರ ಪೊಂಗಲ್, ಬಣ್ಣ ಬಣ್ಣದ ರಂಗೋಲಿ, ಸಕ್ಕರೆ ಅಚ್ಚು, ಕಬ್ಬು ಮುಂತಾದವುಗಳು.
 • ಇಚ್ಛಾಮರಣಿಯಾದ ಭೀಷ್ಮ ಪ್ರಾಣ ಬಿಡಲು ಉತ್ತರಾಯಣ ಪರ್ವ ಕಾಲವನ್ನೇ ಆಯ್ದುಕೊಂಡಿದ್ದರು ಎಂಬ ಉಲ್ಲೇಖ ಮಹಾಭಾರತದಲ್ಲಿ ಬರುತ್ತದೆ. ಅಂದರೆ, ಸಂಕ್ರಮಣದ ಹೆಜ್ಜೆ ಗುರುತುಗಳು ಪೌರಾಣಿಕ ಕಾಲಗರ್ಭದಲ್ಲೂ ಇದ್ದವು ಎಂಬುದು ಸ್ಪಷ್ಟ.

 ಸಂಕ್ರಾಂತಿ ಹಬ್ಬದ ಇತಿಹಾಸ

 • ಸನಾತನ ಧರ್ಮದ ಆರು ವೇದಾಂಗಗಳಲ್ಲಿ ಜ್ಯೋತಿಷ್ಯ ಪ್ರಾಮುಖ್ಯತೆ ಪಡೆದಿದೆ. ಈ ಶಾಸ್ತ್ರದಂತೆ ಸೂರ್ಯನು ನಿರ್ಯಾಣ ಮಕರರಾಶಿಯನ್ನು ಪ್ರವೇಶಿಸಿದಾಗ 'ಮಕರ ಸಂಕ್ರಾಂತಿ' ಸಂಭವಿಸುತ್ತದೆ. ಗ್ರೆಗೋರಿಯನ್ ಪಂಚಾಂಗದ ಪ್ರಕಾರ ಜನವರಿ 13ರಂದು ರಾತ್ರಿ 12 ಗಂಟೆ 57 ನಿಮಿಷಕ್ಕೆ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ವೇಳೆಗೆ ರಾತ್ರಿಯಾಗಿದ್ದರಿಂದ ಜನವರಿ 14ರಂದು ಮಕರ ಸಂಕ್ರಾತಿ ಆಚರಿಸುವುದು ವಾಡಿಕೆಯಾಗಿದೆ.
 • ನಭೋಮಂಡಲದಲ್ಲಿ ಪ್ರತಿ ವರ್ಷ ನಿಗದಿತ ದಿನಕ್ಕೆ, ನಿಗದಿತ ಸಮಯಕ್ಕೆ ಸಂಭವಿಸುವ ಅಚ್ಚರಿಯ ಪ್ರತಿಫಲವೇ ಸಂಕ್ರಾಂತಿ. ಸೂರ್ಯ ತನ್ನ ಚಲನ ಮಾರ್ಗವನ್ನು ಉತ್ತರಾಯಣದಿಂದ ದಕ್ಷಿಣಾಯಣಕ್ಕೆ ಬದಲಾಯಿಸುತ್ತಾನೆ. ಈ ಮಹಾಚಲನೆ ಇಡೀ ಪ್ರಪಂಚದ ಪರಿಸರದ ದಿಕ್ಕನ್ನೇ ಪರಿವರ್ತಿಸುತ್ತದೆ. ಈ ಪರಿವರ್ತನೆಯನ್ನೇ ಭಾರತೀಯರು ಸಂಕ್ರಾಂತಿ ಹಬ್ಬವಾಗಿ ಆಚರಿಸುತ್ತ ಬಂದಿರುವುದು.
 • ಯಾವುದೇ ಸ್ಥಳದಲ್ಲಿ ಕರಾರುವಾಕ್ಕಾಗಿ ಪೂರ್ವದಲ್ಲೇ ಸೂರ್ಯೋದಯವಾಗುವುದು ಮತ್ತು ಪಶ್ಚಿಮದಲ್ಲೇ ಸೂರ್ಯಾಸ್ತಮಾನವಾಗುವುದು ವರ್ಷದಲ್ಲಿ ಎರಡೇ ದಿನಗಳಂದು. ಆ ದಿನಗಳನ್ನು ಈಕ್ವಿನಾಕ್ಸ್ (equinox)ಎಂದು ಕರೆಯುತ್ತಾರೆ. ಅಂದು ಹಗಲಿರುಳುಗಳು ದಿನವನ್ನು ಸಮಪಾಲಾಗಿ, ಅಂದರೆ 12 ಗಂಟೆಗಳಾಗಿ ಹಂಚಿಕೊಳ್ಳುತ್ತವೆ. ವರ್ಷದ ಉಳಿದ ದಿನಗಳಲ್ಲಿ ಹಗಲಿರುಳುಗಳ ಪಾಲು ಸಮವಾಗಿರುವುದಿಲ್ಲ.
 • ಸೂರ್ಯ ಇನ್ನು ದಕ್ಷಿಣ ದಿಕ್ಕಿನತ್ತದ ತನ್ನ ಚಲನವನ್ನು ನಿಲ್ಲಿಸಿ ಉತ್ತರಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಈ ದಿನ ಉತ್ತರಾಯಣದ ದಿನ. ಇದು ಚಳಿಗಾಲ ಮುಗಿದು ಮುಂಬರುವ ಬೇಸಗೆಯ ಮುನ್ಸೂಚನೆ. winter solstice ಎಂದೂ ಕರೆಯಲ್ಪಡುತ್ತದೆ. ಸುಮಾರು ಡಿಸೆಂಬರ್ 22 ಈ ದಿನ. ಈ ದಿನವನ್ನು ಮಕರ ಸಂಕ್ರಾಂತಿಯೆಂದು ಗುರುತಿಸಬೇಕಾಗಿದ್ದರೂ ಸಾಂಪ್ರದಾಯಿಕವಾಗಿ ಜನವರಿ ತಿಂಗಳ ನಡುವಿನಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸುತ್ತೇವೆ

ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬ

 • ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬಕ್ಕೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು "ಎಳ್ಳು-ಬೆಲ್ಲ". ಮನೆಯಲ್ಲಿ ಎಳ್ಳು-ಬೆಲ್ಲವನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ "ಎಳ್ಳು-ಬೆಲ್ಲ ಹಂಚುವುದು" ಸಂಕ್ರಾಂತಿಯ ಸಂಪ್ರದಾಯ. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು ಸಹ ಬೀರುವುದುಂಟು. ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ “ಎಳ್ಳು-ಬೆಲ್ಲ" ತಯಾರಿಸಲಾಗುತ್ತದೆ.

 ಎಳ್ಳು-ಬೆಲ್ಲ ತಿನ್ನುವುದರ ಮಹತ್ವ

 • ಚಳಿಗಾಲದ ಸಂಕ್ರಾಂತಿಯ ಈ ಆಚರಣೆ ಧಾರ್ಮಿಕ ಹಿನ್ನೆಲೆಯಾಗಿ ಪ್ರಧಾನ್ಯತೆ ಪಡೆದುಕೊಂಡಂತೆ, ವೈಜ್ಞಾನಿಕ ಪರಿಭಾಷೆಯಾಗಿಯೂ ಉಳಿದುಕೊಂಡಿದೆ. ಈ ಹಬ್ಬದಲ್ಲಿ ಹಿರಿಯರು ತಯಾರು ಮಾಡುವ ಎಳ್ಳು-ಬೆಲ್ಲದಲ್ಲಿ ಯಾವ ಪದಾರ್ಥಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತವೋ ಇಲ್ಲವೋ ಗೊತ್ತಿಲ್ಲ ಆದರೆ ಎಳ್ಳು ಮತ್ತು ಬೆಲ್ಲಕ್ಕೆ ಮಾತ್ರ ಹೆಚ್ಚಿನ ಪ್ರಾಶಸ್ತ್ಯವಿದೆ.
 • ಮಕರ ಸಂಕ್ರಾಂತಿಗೆ ನಕ್ಷತ್ರಗಳಿಗನುಗುಣವಾಗಿ ಚಳಿಗಾಲದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮೈ ಚರ್ಮಗಳು ಬಿಳಿಚಿಕೊಂಡು, ಒಣಗಿದಂತೆ ಕಂಡು ಬರುತ್ತದೆ. ಕಾಂತಿಯುತವಾಗಿ ಕಾಣುವುದಿಲ್ಲ. ಅಲ್ಲದೇ ಡಿಸೆಂಬರ್ ತಿಂಗಳಿನಿಂದ ಫೆಬ್ರವರಿಯವರೆಗೆ, “ಯಾಕಾದ್ರೂ ಚಳಿಗಾಲ ಬರುತ್ತಪ್ಪಾ” ಎಂದು ನಾವೇ ಕೈ ಹಿಚುಕಿಕೊಳ್ಳುತ್ತಿರುತ್ತೇವೆ. ಅಲ್ಲದೇ ಚರ್ಮ ಸುಕ್ಕು ಗಟ್ಟುವುದು, ಕೆಮ್ಮು ಶೀತ, ಗಾಯ ಒಣ್ಗುವುದು ತಡವಾಗುವುದು ಹೀಗೆ ಈ ಎಲ್ಲಾ ಸಮಸ್ಯೆಗಳಿಗೆ ರಾಮಬಾಣವೇ ಈ ಎಳ್ಳು-ಬೆಲ್ಲ.

 • ಕರ್ನಾಟಕದ ರೈತರಿಗೆ ಸುಗ್ಗಿ ಅಥವಾ ಸುಗ್ಗಿಯ ಹಬ್ಬ.ಈ ಮಂಗಳಕರ ದಿನದಂದು, ಯುವತಿಯರು (ಮಕ್ಕಳು ಮತ್ತು ಹದಿ ಹರೆಯದವರು) ಹೊಸ ಬಟ್ಟೆಗಳನ್ನು ಧರಿಸಿ ಒಂದು ತಟ್ಟೆಯಲ್ಲಿ ಎಳ್ಳುಬೆಲ್ಲದೊಂದಿಗೆ ಹತ್ತಿರದ ಜನರನ್ನು ಮತ್ತು ಸಂಬಂಧಿಗಳನ್ನು ಭೇಟಿಯಾಗಿ ಎಳ್ಳು-ಬೆಲ್ಲವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. "ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತಾಡೋಣ" ಎಂದು ಹೇಳಿಕೊಳ್ಳುತ್ತಾರೆ. ಇದರ ಜೊತೆಗೆ ಕಬ್ಬಿನ ತುಂಡು ಮತ್ತು ವಿವಿಧ ಆಕಾರಗಳ ಸಕ್ಕರೆ ಅಚ್ಚುಗಳು ಕೂಡಾ ಇರುತ್ತವೆ.
 • ಕಬ್ಬು ಈ ಭಾಗಗಳಲ್ಲಿ ಪ್ರಧಾನ ಬೆಳೆ, ಏಕೆಂದರೆ ಹಬ್ಬದ ಋತು ಸುಗ್ಗಿಯನ್ನು ಸೂಚಿಸುತ್ತದೆ. ಕರ್ನಾಟಕದ ಕೆಲವು ಭಾಗಗಳಲ್ಲಿ, ಹೊಸದಾಗಿ ಮದುವೆಯಾದ ಮಹಿಳಯರು ತಮ್ಮ ಮದುವೆಯ ಮೊದಲ ವರ್ಷದಿಂದ ಐದು ವರ್ಷಗಳ ಕಾಲ ಬಾಳೆ ಹಣ್ಣುಗಳನ್ನು ಮುತ್ತೈದೆಯರಿಗೆ ಕೊಡುವ ಸಂಪ್ರದಾಯ ಇದೆ. ಬಾಳೆಹಣ್ಣುಗಳ ಸಂಖ್ಯೆಯನ್ನು ಪ್ರತಿವರ್ಷ ಐದರಿಂದ ಹೆಚ್ಚಿಸಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ , ಸಮುದಾಯದ ಸದಸ್ಯರೊಂದಿಗೆ ಗಾಳಿ ಪಟ ಹಾರಿಸುವ ಸಂಪ್ರದಾಯವಿದೆ.
 • ಮಹಿಳೆಯರು ಗುಂಪು ಗುಂಪಾಗಿ ರಂಗೋಲಿಯನ್ನು ಬಿಡಿಸುವುದು ಸಂಕ್ರಾಂತಿಯ ಸಮಯದ ಮತ್ತೊಂದು ಜನಪ್ರಿಯ ಘಟನೆಯಾಗಿದೆ. ಅವುಗಳನ್ನು "ಕಿಚ್ಚು ಹಾಯಿಸುವುದು" ಹಳ್ಳಿಗಳಲ್ಲಿ ಸಾಮಾನ್ಯವಾಗಿದೆ.

 

ಸುಗ್ಗಿ ಕಾಲದ ಹಬ್ಬ

 • ಎಳ್ಳು-ಬೆಲ್ಲ ನಮ್ಮ ತ್ವಚೆಗೆ ತಾಮ್ರ, ಕ್ಯಾಲ್ಸಿಯಂ, ಸತು, ಕಬ್ಬಿಣದಂಶ ಹಾಗೂ ವಿಟಮಿನ್-ಇ ಇವುಗಳನ್ನು ದೇಹಕ್ಕೆ ನೀಡುವುದರ ಜೊತೆಗೆ ಬಾಯಿಗೆ ರುಚಿಯನ್ನು ನೀಡುತ್ತದೆ.
 • ಮೊದಲನೇ ದಿನದ ಆಚರಣೆಯಲ್ಲಿ ಇಂದ್ರ ದೇವತೆಯನ್ನು ಪೂಜಿಸಲಾಗುವುದು. ಈ ಸಮಯದಲ್ಲಿ ಬೆಳೆ ಸಂಪತ್ತು ಭರಿತವಾಗಿ ಬೆಳೆಯಲು ನೀರು ಮತ್ತು ಗಾಳಿಯನ್ನು ನೀಡಿದ್ದಕ್ಕೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಲಾಗುವುದು. ಭೋಗಿ ಆಚರಣೆಯನ್ನು ನಂತರ ಆಚರಿಸಲಾಗುವುದು. ಈ ದಿನ ಮನೆಯಲ್ಲಿರುವ ಬೇಡದ ಸಾಮಾನುಗಳನ್ನು ತಂದು ಗುಡ್ಡೆ ಹಾಕಿ ಬೆಂಕಿ ಹಚ್ಚಿ ಭಸ್ಮ ಮಾಡುವ ಸಂಪ್ರದಾಯವಿದೆ.
 • ಪೊಂಗಲ್/ ಬೋಗಿ ಎಂದು ತಮಿಳುನಾಡಿನಲ್ಲಿ ವಿಷೇಶವಾಗಿ ಆಚರಿಸುತ್ತಾರೆ. ಈ ಹಬ್ಬದಲ್ಲಿ ಜನರು ಖಾರ ಮತ್ತು ಸಿಹಿ ಪೊಂಗಲ್ ಅನ್ನು ತಯಾರಿಸುತ್ತಾರೆ. ಎರಡನೇ ದಿನವನ್ನು ಪೊಂಗಲ್ ಎಂದು ಆಚರಿಸಲಾಗುವುದು. ಈ ದಿನ ಪೊಂಗಲ್ ಅಡುಗೆಯನ್ನು ತಯಾರಿಸಲಾಗುವುದು. ಪೊಂಗಲ್ ಅಡುಗೆ ಮಾಡುವ ಮಡಿಕೆಯ ಸುತ್ತ ಅರಿಶಿಣ ಗಿಡವನ್ನು ಕಟ್ಟುತ್ತಾರೆ. ಪೊಂಗಲ್ ಅಡುಗೆ ಮಾಡುವ ಜಾಗವನ್ನು ರಂಗೋಲಿಯಿಂದ ಅಲಂಕರಿಸಲಾಗಿರುತ್ತದೆ. ಕಬ್ಬಿನಿಂದ ತೋರಣ ಕಟ್ಟಿರುತ್ತಾರೆ. ಅಕ್ಕಿ, 2 ಕಡ್ಡಿ ಕಬ್ಬು, ಬಾಳೆ ಹಣ್ಣು, ತೆಂಗಿನ ಕಾಯಿಯನ್ನು ದೇವರಿಗೆ ನೈವೇದ್ಯವಾಗಿ ಇಡಲಾಗಿರುತ್ತದೆ.
 • 3ನೇ ದಿನವನ್ನು ಮಾಟು ಪೊಂಗಲ್ ಎಂದು ಆಚರಿಸುತ್ತಾರೆ. ಈ ದಿನ ದನಗಳಿಗೆ ಅಲಂಕಾರ ಮಾಡುತ್ತಾರೆ. ಅವುಗಳ ಕುತ್ತಿಗೆಗೆ ಗಂಟೆ ಕಟ್ಟುತ್ತಾರೆ. ಹೂವಿನ ಮಾಲೆಯನ್ನು ಹಾಕುತ್ತಾರೆ. ದನಗಳಿಗೆ ಪೊಂಗಲ್ ಅಡುಗೆಯನ್ನು ನೀಡಲಾಗುವುದು. ನಂತರ ಅವುಗಳನ್ನು ಸಮೀಪದ ಪ್ರದೇಶಗಳಿಗೆ ಮೇಯಲು ಬಿಡಲಾಗುವುದು. ಕರ್ನಾಟಕದಲ್ಲಿ ಸಂಕ್ರಾಂತಿಯ ಹಬ್ಬದಂದು ದನಕರುಗಳಿಗೆ ಸ್ನಾನ ಮಾಡಿಸಿ ಕೊಂಬುಗಳಿಗೆ ಬಣ್ಣವನ್ನು ಬಳಿದು ಕಿಚ್ಚನ್ನು ಹಾಯಿಸುತ್ತಾರೆ. ತಿನ್ನಲು ಅಕ್ಕಿ ಬೆಲ್ಲವನ್ನು ದನ ಕರುಗಳಿಗೆ ನೀಡುವರು.
 • ಹಸುಗಳನ್ನು ಸಂಕ್ರಾಂತಿ ಹಬ್ಬದಲ್ಲಿ ಕಿಚ್ಚುಹಾಯಿಸಲು ಒಂದು ಕಾರಣವಿದೆ. ಚಳಿಗಾಲದಲ್ಲಿ ದನಕರುಗಳಿಗೆ ಸಣ್ಣ ಹುಳುಗಳು ಅಂಟಿ ಕೊಂಡಿರುತ್ತವೆ ಕಿಚ್ಚನ್ನು ಹಾಯಿಸುವುದರಿಂದ ದನಕರುಗಳಲ್ಲಿ ಇರುವ ಹುಳ ಹುಪ್ಪಟೆಗಳು ಹೋಗುವವೆಂದು ಈ ಆಚರಣೆಯನ್ನು ಮಾಡಲಾಗುವುದು.
 • ಹೀಗೆ ನಾನಾ ಕಡೆಗಳಲ್ಲಿ ನಾನಾ ವಿಧವಾಗಿ ಒಂದೇ ದಿನ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. “ಎಳ್ಳು-ಬೆಲ್ಲ ಕೊಟ್ಟು ಒಳ್ಳೆ ಮಾತನಾಡು” ಎಂಬುದು ಈ ಹಬ್ಬದ ಸಂಕೇತವಾಗಿದೆ. ವರ್ಷದ ಮೊದಲ ಹಬ್ಬ ಹಾಗು ಸಂಭ್ರಮದ ಹಬ್ಬವಾಗಿ ಸಂಕ್ರಾಂತಿಯನ್ನು ಎಲ್ಲರು ಸಂತೋಷ ಹಾಗು ಸಡಗರದಿಂದ ಆಚರಿಸುತ್ತರೆ.
 • ಬಾಂದವ್ಯಗಳು ಗಟ್ಟಿಯಾಗಿರಲಿ ಸಂಬಂಧಗಳು ಬಲವಾಗಲಿ ಎಂಬ ಕಾರಣದಿಂದ ಮನೆ ಮನೆಗಳಿಗೆ ಹೆಣ್ಣು ಮಕ್ಕಳು ಸಿಂಗಾರ ಮಾಡಿಕೊಂಡು ಎಳ್ಳು, ಬೆಲ್ಲ, ಸಕ್ಕರೆ ಅಚ್ಚು, ಕಬ್ಬನ್ನು ಹಂಚಿ ಸಂಭ್ರಮಿಸುವರು. ಆದರೆ ಈಗ ಫೋನಿನ ಸಹಾಯದಿಂದ ಎಲ್ಲರಿಗೂ ಎಳ್ಳು ಬೆಲ್ಲದ ಚಿತ್ರವನ್ನು ಕಳುಹಿಸಿ ಸಂಕ್ರಾಂತಿಯ ಶುಭಾಶವನ್ನು ಹೇಳಲಾಗುತ್ತಿದೆ. ಹೀಗಿರುವಾಗ ಸಂಕ್ರಾಂತಿಯು ತನ್ನ ಅರ್ಥವನ್ನು ಕಳೆದುಕೊಳ್ಳುತ್ತಿದ್ದೆ ಎಂಬುದು ನನ್ನ ಅಭಿಪ್ರಾಯವಾಗಿದೆ. 
Categories
Read more