100% FREE Shipping all across India

ಮಹಾಶಿವರಾತ್ರಿ

ಮಹಾಶಿವರಾತ್ರಿ

ಶಿವರಾತ್ರಿ
ಓಂ ನಮಃ ಶಿವಾಯ
ಹರ ಹರ ಮಹಾದೇವ್, ಶಂಭೋ ಶಂಕರ.

ಶಿವ ಶಿವ ಎಂದು ಚಳಿಗಾಲವು ಹೋಗಿ ಬೇಸಿಗೆಯು ಪ್ರಾರಂಭವಾಗುವ ಸಮಯವೇ ಶಿವರಾತ್ರಿ.

 ಶಿವ ಶಿವ ಎಂದರೆ ಭಯವಿಲ್ಲ ಶಿವನಾಮಕೆ ಸಾಟಿ ಬೇರಿಲ್ಲ.

ಶಿವ ರಾತ್ರಿ ಅಂದರೆ ಶಿವನ ರಾತ್ರಿ ಶಿವ ಮತ್ತು ಪಾರ್ವತಿ ಮದುವೆಯಾದ ದಿನ.ಇಡೀ ವರ್ಷ ಶಿವನು ನಮಗಾಗಿ ಕಾಯ್ದರೆ ಶಿವರಾತ್ರಿಯ ದಿನ ನಾವು ಶಿವನನ್ನು ಮಲಗಿಸಿ ಅವನನ್ನುಕಾಯುವ ಶುಭರಾತ್ರಿ. ಜಗತ್ತನ್ನು ಕಾಯುವ  ಕಾಲ ಭೈರವನಿಗೆ ಇಂದು ಒಂದೇ ದಿನ ವಿಶ್ರಮಿಸಲು ಸಮಯ ಸಿಗುವುದು, ಎಂಬ ಮಾತನ್ನು ಕೇಳಿದರೆ  ಬಲು ರೋಮಾಂಚನ.ದೇವರನ್ನು ಮಲಗಿಸಿ ಮಾನವ ದೇವರನ್ನು ಕಾಯುವುದು ಎಂದರೇ ನಂಬಲು ಅಸಾಧ್ಯಾವಾದುದು. ಆದರು ಪುರಾಣ ಕಾಲದಿಂದ ಮಹಾ ಶಿವರಾತ್ರಿಯನ್ನು ಹಿಂದುಗಳ ಪವಿತ್ರ ಹಬ್ಬವಾಗಿ ಮಾಘ ಮಾಸದ ಬಹುಳ ಚತುರ್ಥಿಯಂದು ಆಚರಿಸಲಾಗುತ್ತದೆ.ಪ್ರತಿ ವರ್ಷ ಫ಼ೆಬ್ರವರಿ ಅಥವ ಮಾರ್ಚ್ ತಿಂಗಳಲ್ಲಿ ಬರುವ ಹಬ್ಬ  ಈ ವರ್ಷ ಮಾರ್ಚ್ ೧ ರಂದು ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ.

ಈ ಹಬ್ಬದಲ್ಲಿ ಬಕ್ತಾದಿಗಳು ಇಡೀ ದಿನ ಉಪವಾಸವನ್ನು ಮಾಡಿ  ಸಂಜೆಯಲ್ಲಿ ಸ್ವಲ್ಪ ಉಪಹಾರವನ್ನು ತೆಗೆದುಕೊಳ್ಳುವರು. ನಂತರ ಇಡೀ ರಾತ್ರಿ  ಭಜನೆ, ಹರಿಕಥೆಯನ್ನು ಮಾಡಿ ಉಪಹಾರವನ್ನು ಹಂಚಿ ಬೆಳಗಿನವರೆಗೆ  ಜಾಗರಣೆಯನ್ನುಮಾಡುವರು. ಇದು ಭಕ್ತರು ದೇವರಿಗೆ ತಮ್ಮ ಭಕ್ತಿಯನ್ನು ತೋರಿಸುವ ವಿಧಾನವಿದು.

ವೇದಗಳ ಪ್ರಕಾರ ಪೂಜೆಯ ಆಚರಣೆ

ಬಿಲ್ವದ ಎಲೆ ಹೃದಯವನ್ನು ಹೋಲುತ್ತದೆ ಮತ್ತು ಲಿಂಗ ಪರಮಾತ್ಮನ ಪ್ರತೀಕ. ಆದ್ದರಿಂದ ಇವೆರಡರ ಜೊತೆಗೂಡಿಕೆ ಆತ್ಮ ಪರಮಾತ್ಮಗಳ ಮಿಲನ. ರಾತ್ರಿಯು ಅಜ್ಞಾನದ ಸಂಕೇತ ಮತ್ತು ಆ ವೇಳೆಯಲ್ಲಿ ನಿದ್ರೆ ಮಾಡದೇ ಎಚ್ಚರವಾಗಿರುವುದು ತಿಳುವಳಿಕೆಯ ಕಡೆಗೆ ಹೋಗುತ್ತಿರುವ ಸಂಕೇತ. ಹೀಗೆ ಶಿವರಾತ್ರಿಯ ರಾತ್ರಿ ಜಾಗರಣೆ ಮಾಡುವುದು ಮೋಕ್ಷದ ಕಡೆಗೆ ಹೊಗುವುದು ಎಂದು ತತ್ವಗಳು ತಿಳಿಸುತ್ತವೆ.

ವೈಜ್ಞಾನಿಕವಾಗಿ ಶಿವರಾತ್ರಿ

ಸೂರ್ಯ ಮತ್ತು ಚಂದ್ರರ ಚಲನೆಯಿಂದಾಗುವ ಎಲ್ಲಾ ಕಾಲ ವ್ಯತ್ಯಾಸಕ್ಕೆ ಈ ನಮ್ಮ ದೇಹ ಹೊಂದಿಕೊಳ್ಳ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈ ಹಬ್ಬದ ಆಚರಣೆ ಬಹು ಮುಖ್ಯ. ಈ ಸಮಯದಲ್ಲಿ ಛಳಿಗಾಲವು ಮುಗಿದು ಬೇಸಗೆಕಾಲವು ಪ್ರಾರಂಭಗೊಳ್ಳುವುದು. ಅಂದರೆ ಈ ದಿನದಂದು ಚಳಿಗಾಲ ಉತ್ತುಂಗದಲ್ಲಿದ್ದು ಅಂದು ಕೃಷ್ಣ ಪಕ್ಷದ ಕೊನೆಯ ದಿನವೂ ಆಗಿರುತ್ತದೆ. ಈ ದಿನದಲ್ಲಿ ಸೂರ್ಯನ ಶಾಖ ಕಡಿಮೆಯಾಗಿರುತ್ತದೆ ಮತ್ತು ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ನಮ್ಮ ಪೂರ್ವಜರು ಇದನ್ನೆಲ್ಲಾ ಅರಿತೇ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು. ಈ ವ್ಯತ್ಯಯದ ಸಮಯದಲ್ಲಿ ನಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ಈ ಕಾಲ ವ್ಯತ್ಯಾಸದ ಸಮಯದಲ್ಲಿ ನಮ್ಮಲ್ಲಿ ಉಸಿರಾಟದ ತೊಂದರೆ (ನೆಗಡಿ, ಕೆಮ್ಮು, ಶೀತ ಮತ್ತಿತರೆ) ಬರುವುದು. ಈ ದಿನದಂದು ನಾವು ಮಾಡುವ ಶಿವನ ಪೂಜೆ, ಉಪವಾಸಗಳು ನಮಗೆ ತುಂಬಾ ಉಪಯುಕ್ತ. ಅಂದು ಪರಶಿವನಿಗೆ ನೀರಿನ ಅಭಿಷೇಕ ಮತ್ತು ಬಿಲ್ವ ಪತ್ರೆಯ ಪೂಜೆ. ಬಿಲ್ವ ಪತ್ರೆಯಲ್ಲಿ ಉಸಿರಾಟದ ತೊಂದರೆ ನಿವಾರಿಸುವ ಗುಣವಿದೆ. ಬಿಲ್ವವನ್ನು ಲಿಂಗದ ಮೇಲೆ ಹಾಕುವಾಗ ಅದರ ವಾಸನೆ ನಮ್ಮ ದೇಹದ ಒಳಗೆ ಹೋಗುವುದು. ಬಿಲ್ವವನ್ನು ಮೂಸಿ ಎಸೆಯುವುದು ಸರಿಯಾದ ವಿಧಾನ. ಶಿವನ ಲಿಂಗವು ಕಲ್ಲಿನದಾಗಿದ್ದು ಅದರ ಮೇಲೆ ನೀರನ್ನು ಸುರಿಯುವುದರಿಂದ ಬಹಳಷ್ಟು ಶಕ್ತಿ ಹೊರಹೊಮ್ಮುತ್ತದೆ. ಅದೊಂದು ವಿಶಿಷ್ಟ ಕಲ್ಲಿನಿಂದ ಮಾಡಿದ ಲಿಂಗವಾಗಿರುತ್ತದೆ.

ಶಿವರಾತ್ರಿಯ ದಿನ ರಾತ್ರಿ ಪೂಜೆಯೇ ವಿಶೇಷ. ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿ ಮಾತ್ರ ರಾತ್ರಿಯ ಹೊತ್ತು ಪೂಜೆ, ಭಜನೆ ನಡೆಸುವ ವಿಶೇಷ ಆಚರಣೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಅಜ್ಞಾನ ತುಂಬಿರುವಲ್ಲಿ ಶಿವ
ಸಂಚರಿಸಿ ಜ್ಞಾನ ದೀವಿಗೆಯನ್ನು ಬೆಳಗುತ್ತಾನೆ ಎಂಬ ನಂಬಿಕೆ ಇದೆ.

ಪುರಾಣದಲ್ಲಿ ಶಿವರಾತ್ರಿಯ ಉಲ್ಲೇಖ

ಪುರಾಣಗಳ ಪ್ರಕಾರ ಶಿವಪುರಾಣದಲ್ಲಿ ಶಿವಾರಾತ್ರಿಯ ಆಚರಣೆ ಬಂದಿರುವ ಬಗ್ಗೆ ಒಂದು ಸಣ್ಣ ಕಥೆ ಇದೆ.... ದೇವಲೋಕದಲ್ಲಿ ಒಮ್ಮೆ ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ಯಾರು ಶ್ರೇಷ್ಠರು ಎಂಬ ವಿಷಯಕ್ಕೆ ವಾಗ್ವಾದಗಳು ನಡೆಯುತ್ತಿದ್ದವು. ಮಹಾ ದೇವತೆಗಳಿಬ್ಬರನ್ನೂ ಸಮಾಧಾನ ಮಾಡುವುದು ದುರ್ಲಭ ಎನಿಸಿದಾಗ, ದೇವತೆಗಳೆಲ್ಲ ಹೋಗಿ ಪರಶಿವನನ್ನು ಬೇಡಿಕೊಳ್ಳುತ್ತಾರೆ. ವಿಷ್ಣು ಹಾಗೂ ಬ್ರಹ್ಮರ ಜಗಳವನ್ನು ಶಮನ ಮಾಡುವಂತೆ ಕೋರಿಕೊಳ್ಳುತ್ತಾರೆ. ಆಗ ವಿಷ್ಣು ಮತ್ತು ಬ್ರಹ್ಮರ ನಡುವೆ ಶಿವ, ಅಗ್ನಿಕಂಭದ ರೂಪದಲ್ಲಿ ಬಂದು ನಿಂತು ತನ್ನ ಮೂಲವನ್ನು ಕಂಡುಹಿಡಿಯಲು ಸೂಚಿಸುತ್ತಾನೆ.

ಆಗ ಹಂಸದ ರೂಪ ತಾಳಿದ ಬ್ರಹ್ಮ ಅಗ್ನಿ ಕಂಭದ ಶಿರವನ್ನು ಹುಡುಕಲು ಮೇಲ್ಮುಖವಾಗಿ ಹೊರಡುತ್ತಾನೆ. ವಿಷ್ಣು ವರಾಹವತಾರ ತಾಳಿ ಕಂಭದ ತಳವನ್ನು ನೋಡುವುದಕ್ಕಾಗಿ ಪಾತಾಳಕ್ಕೆ ಇಳಿಯುತ್ತಾನೆ. ಎಷ್ಟೇ ಮುಂದೆ ಸಾಗಿದರೂ ಬ್ರಹ್ಮ ಹಾಗೂ ವಿಷ್ಣು ಇವರಿಬ್ಬರಿಗೂ ಕಂಭದ ಅಂತ್ಯವೇ ಕಾಣುವುದಿಲ್ಲ. ಅನಂತವಾಗಿರುವ ಶಿವನ ಶಕ್ತಿಯನ್ನು ನೋಡಿದ ವಿಷ್ಣು ಹಾಗೂ ಬ್ರಹ್ಮರಿಗೆ ಸತ್ಯದ ಅರಿವಾಗುತ್ತದೆ. ಆದರೆ ಶಿವನ ಜಡೆಯಿಂದ ಕೆಳಗೆ ಬೀಳುತ್ತಿದ್ದ ಕೇತಕಿ ಪುಷ್ಫದ ಬಳಿ ಬ್ರಹ್ಮ , ನೀನು ಎಲ್ಲಿಂದ ಬೀಳುತ್ತಿದ್ದೀಯ ಎಂದು ಪ್ರಶ್ನಿಸುತ್ತಾನೆ. ಆಗ ಆ ಪುಷ್ಪವು ನಾನು ಅಗ್ನಿ ಕಂಭದ ಶಿರದಿಂದ ಬೀಳುತ್ತಿದ್ದೇನೆ ಎಂಬ ಉತ್ತರ ನೀಡುತ್ತದೆ. ಆಗ ಬ್ರಹ್ಮ ಶಿವನಲ್ಲಿಗೆ ಬಂದು ಕೇತಕಿ ಪುಪ್ಪವನ್ನು ತೋರಿಸಿ, ತಾನು ಅಗ್ನಿ ಕಂಭದ ಶಿರಭಾಗವನ್ನು ನೋಡಿರುವುದಾಗಿಯೂ ಅಲ್ಲಿಂದಲೇ ಕೇತಕಿ ಪುಷ್ಪವನ್ನು ತಂದಿರುವುದಾಗಿಯೂ ಹೇಳುತ್ತಾನೆ. ಇವರಿಬ್ಬರ ಮೋಸವನ್ನು ಅರಿತ ಶಿವ, ಬ್ರಹ್ಮನನ್ನು ಯಾರೂ ಪೂಜಿಸಕೂಡದು ಎಂದು ಶಾಪ ನೀಡಿ ಲಿಂಗರೂಪ ತಾಳುತ್ತಾನೆ. ಅಂದು ಮಾಘ ಮಾಸದ ಬಹುಳ ಚತುರ್ದಶಿಯಾಗಿರುತ್ತದೆ. ಹೀಗಾಗಿ, ಶಿವ ಲಿಂಗರೂಪ ತಾಳಿದ ಮಾಘ ಮಾಸದ ಬಹುಳ ಚತುರ್ದಶಿಯಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ.

ಹಾಲಾಹಲವನ್ನು ಕುಡಿದ ರಾತ್ರಿ

ಮತ್ತೊಂದು ಕಥೆಯ ಪ್ರಕಾರ ದೇವತೆಗಳು ಮತ್ತು ಅಸುರು ಅಮೃತಕ್ಕಾಗಿ ಸಮುದ್ರ ಮಂಥನ ಮಾಡ ಬೇಕಾದರೆ  ಮೊದಲು ಮಡಿಕೆ ತುಂಬ ಹಾಲಾಹಲ ಉತ್ಪತ್ತಿಯಾಯಿತು.. ಆದರೆ ದೇವತೆಗಳಾಗಲಿ  ಅಸುರಾಗಲಿ ಯಾರೂ ಆ ಹಾಲಾಹಲವನ್ನು ಕುಡಿಯಲು ಮುಂದಗಲಿಲ್ಲ.. ಆ ಹಾಲಾಹಲ ಇಡೀ ನಭೋಮಂಡಲವನ್ನೇ ನಾಶಮಾಡಬಲ್ಲ ಸಾಮರ್ಥ್ಯವನ್ನು ಹೊಂದಿತ್ತು. ಹೀಗಾಗಿ ಲೋಕ ಕಲ್ಯಾಣಕ್ಕಾಗಿ ಪರಶಿವನೇ ಆ ಹಾಲಾಹಲವನ್ನು ಕುಡಿದುಬಿಟ್ಟ. ಅದೇ ಸಮಯಕ್ಕೆ ಪತ್ನಿ ಪಾರ್ವತಿ ದೇವಿ ಬಂದು ಆ ವಿಷ ಶಿವನ ಹೊಟ್ಟೆ ಸೇರದಂತೆ ಗಂಟಲಲ್ಲೇ ತಡೆ ಹಿಡಿದಳು. ವ್ಯಕ್ತಿಗಳು ನಿದ್ರಿಸುತ್ತಿದ್ದರೆ ವಿಷವು ಬೇಗನೆ ದೇಹದ ತುಂಬ ಹರಡುತ್ತದೆ. ಹೀಗಾಗಿ ದೇವತೆಗಳೆಲ್ಲರೂ ಶಿವನ ಭಜನೆ ಮಾಡಿ ಶಿವನನ್ನು ಎಚ್ಚರವಿರಿಸಿದರು.. ಹೀಗಾಗಿ ಈ ಪವಿತ್ರ ದಿನವನ್ನು ಶಿವರಾತ್ರಿ ಎಂದು ಆಚರಿಸಲಾಗುತ್ತದೆ.

ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆ ,ವಿಭೂತಿ, ಪುಷ್ಪವನ್ನು ಅರ್ಪಿಸಿ  ಉಪಸ, ಜಾಗರಣೆಯನ್ನು ಶಿವನ್ನು ಪೂಜಿಸಿದರೆ ನಮ್ಮ ಪಾಪಗಳು ಪರಿಹಾರವಾಗುವ ನಂಬಿಕೆ ಇದೆ.  ಎಲ್ಲ ಸಕಲ ಜೀವ ಸಂಕುಲವನ್ನು ಕಾಯುವ ಶಿವ ಆಡಂಬರ ಪ್ರಿಯನಲ್ಲ, ಆಭರಣವನ್ನು ಧರಿಸುವುದಿಲ್ಲ. ಹಣೆಯಲ್ಲಿ ಬಸ್ಮ(ವಿಭೂತಿ),ಜಟೆಯಲ್ಲಿ ಗಂಗೆ, ಹುಲಿಯ ಚರ್ಮವನ್ನು ಧರಿಸಿ, ಕೊರಳಲ್ಲಿ ಹಾವನ್ನು ಧರಿಸಿದ ಶಿವ ಸ್ಮಶಾನವಾಸಿ ಎಂಬುದು ನಮಗೆಲ್ಲಾ ತಿಳಿದಿರುವ ಸಂಗತಿ.

ಓಂ ಕಾರದ ಮಹತ್ವ

ಯೋಗದ ಪ್ರಕಾರ “ಅ” ಎಂದರೆ ತಮಸ “ಉ” ಎಂದರೆ ತಾಳ್ಮೆ, “ಮ” ಎಂದರೆ ಸತ್ವ ಎಂಬ ಅರ್ಥವನ್ನು ನೀಡುತ್ತದೆ. ಓಂಕಾರ ಹೇಳುವುದರಿಂದ ನಮ್ಮ ಮನಸ್ಸನ್ನು ನಿಗ್ರಹಿಸುವ ಶಕ್ತಿ ಹೆಚ್ಚುವುದು. ಹಿಂದೂ ಧರ್ಮದಲ್ಲಿ ಪ್ರತಿಯೊಂದು ವೇದ ಮಂತ್ರ ಓಂಕಾರದಿಂದಲೇ ಪ್ರಾರಂಭವಾಗುತ್ತದೆ.

ಓಂ ಉಚ್ಛಾರಣೆ ಮಾಡುವುದರಿಂದ ಮನಸ್ಸಿನಲ್ಲಿ ಏಕಾಗ್ರತೆ ಹೆಚ್ಚಾದರೆ, ದೈಹಿಕವಾಗಿಯೂ ಅನೇಕ ಪ್ರಯೋಜನಗಳಿವೆ, ಇದು ಉದ್ವೇಗ ಕಡಿಮೆ ಮಾಡುತ್ತೆ, ಮನಸ್ಸನ್ನು ನಿರಾಳ ವಾಗುತ್ತದೆ, ಅತ್ಯಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ.

ಓಂ ಕಾರದ ಉಪಯೋಗಗಳು

  • ಮನಸ್ಸಿನಲ್ಲಿರುವ ಭಯ, ಅಸಮಾಧಾನವನ್ನು ನಿವಾರಣೆಗೊಳಿಸುತ್ತದೆ.
  • ಓಂಕಾರದ ಪಠಣವು ನಿಮ್ಮ ಸುತ್ತಲಿನ ವಾತಾವರಣವನ್ನು ಶುದ್ಧಗೊಳಿಸಿ, ಧನಾತ್ಮಕ ಕಂಪನವನ್ನು ಉಂಟುಮಾಡುತ್ತದೆ
  • ಓಂಕಾರದ ಉಚ್ಛಾರಣೆಯು ದೇಹದಲ್ಲಿರುವ ಎಲ್ಲಾ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ
  • ಓಂಕಾರದ ಪಠಣದಿಂದ ನಿಮ್ಮ ಹೃದಯದ ಆರೋಗ್ಯ ವೃದ್ಧಿಯಾಗುವುದು ಹಾಗೂ ರಕ್ತಸಂಚಾರವೂ ಆರೋಗ್ಯಕರವಾಗುವುದು
  • ಜೀರ್ಣಾಂಗವ್ಯವಸ್ಥೆಯನ್ನು ಸುಧಾರಿಸುತ್ತದೆ
  • ಓಂಕಾರವು ನಿಮ್ಮಲ್ಲಿರುವ ಉದಾಸೀನತೆಯನ್ನು ಬದಿಗೆ ಸರಿಸಿ, ಉತ್ಸಾಹವನ್ನು ಹೆಚ್ಚಿಸುತ್ತದೆ
  • ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ, ಮಲಗುವ ಮುನ್ನ 5ನಿಮಿಷ ಓಂಕಾರವನ್ನು ಪಠಿಸಿ
  • ಓಂಕಾರದ ಪಠಣದಿಂದ ಶ್ವಾಸಕೋಶದ ಸಾಮರ್ಥ್ಯ ಹೆಚ್ಚುವುದು
  • ಮನುಷ್ಯನ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯವನ್ನು ಹೆಚ್ಚಿಸುವುದು

ಶಿವರಾತ್ರಿಯಲ್ಲಿ ಪ್ರತ್ಯೇಕವಾಗಿ ಯಾವುದೇ ಖಾದ್ಯಗಳನ್ನು ಮಾಡುವುದಿಲ್ಲ. ಏಕೆಂದರೆ ಅಂದು  ಭಕ್ತರು ಇಡೀ ದಿನ ಉಪವಾಸ ವಿರುತ್ತಾರೆ ಹಾಗು ರಾತ್ರಿಯಲ್ಲಿ ಅವಲಕ್ಕಿ ಮತ್ತು ಹಣ್ಣು ಹಂಪಲುಗಳನ್ನು ತಿಂದು ದೇವರ ಧ್ಯಾನ ಮಾಡುವರು.  ಈ ರೀತಿಯಾಗಿ ಉಪವಾಸ ,ಜಾಗರಣೆಯನ್ನು ಮಾಡಿ  ಶಿವರಾತ್ರಿಯನ್ನು ಆಚರಿಸಿ ಶಿವನ ಸಾನಿಧ್ಯವನ್ನು ಪಡೆಯೋಣ.

ಓಂ ನಮಃ ಶಿವಾಯ

*******************************************************

Categories
Read more